ಮುಟ್ಟು	 - 	
ಸ್ತ್ರೀಯಲ್ಲಿ 11-13 ವರ್ಷ ವಯಸ್ಸಿನಿಂದ ಹಿಡಿದು 45-50 ವರ್ಷ ವಯಸ್ಸಿನ ತನಕ (ಗರ್ಭಿಣಿಸ್ಥಿತಿ, ಮಗುವಿಗೆ ಎದೆ ಹಾಲು ಕುಡಿಸುವ ಕಾಲ ಇವನ್ನು ಬಿಟ್ಟು) ತಿಂಗಳು ತಿಂಗಳೂ ಯೋನಿಯಿಂದ ಆಗುವ ರಕ್ತಸ್ರಾವ (ಮೆನ್ಸಸ್, ಮೆನ್‍ಸ್ಟ್ರುಯೇಷನ್, ಮಂತ್ಲಿ ಪೀರಿಯಡ್). ಪರ್ಯಾಯನಾಮಗಳು ಹೊರಗಾಗುವಿಕೆ, ಋತುಕ್ರಮ, ರಜಸ್ಸ್ರಾವ, ತಿಂಗಳು ಇತ್ಯಾದಿ. ಹೆಂಗಸು ಸಂತಾನ ಸಾಮಥ್ರ್ಯ ಉಳ್ಳವಳೆಂದೂ ಅಂಥ ವಯಸ್ಸಿನವಳೆಂದೂ ವ್ಯಕ್ತವಾಗುವ ಈ ಕಾಲ ಆಕೆಯ ಜೀವನದಲ್ಲಿ ಬಲುವಿಶಿಷ್ಟವಾದ ಕಾಲ. ಬಾಲಕಿ ಸುಮಾರು ಹದಿಮೂರನೆಯ ವಯಸ್ಸಿನಲ್ಲಿ ಮೊದಲಬಾರಿ ಮುಟ್ಟಾಗುವುದನ್ನು (ಪ್ರಥಮ ರಜೋದರ್ಶನ, ಮೇನಾರ್ಕಿ) ಮೈನೆರೆಯುವುದು, ದೊಡ್ಡವಳಾಗುವುದು, ಪುಷ್ಪವತಿಯಾಗುವುದು ಎಂದೆಲ್ಲ ವ್ಯವಹರಿಸುವುದಿದೆ. ಮೈನೆರದಮೇಲೆ ತಿಂಗಳು ತಿಂಗಳೂ ಆಕೆ ತನ್ನ 45-50 ವರ್ಷ ವಯಸ್ಸಿನ ತನಕ ಮುಟ್ಟಾಗುತಿರುತ್ತಾಳೆ, ಅನಂತರ ಈ ಕ್ರಮ ಹಠಾತ್ತಾಗಿ ಇಲ್ಲವೆ ಕ್ರಮೇಣ ನಿಂತುಹೋಗುತ್ತದೆ. ಮುಟ್ಟು ನಿಂತಿತು ಎಂದರೆ ಸ್ತ್ರೀ ಮುಂದೆ ಮಕ್ಕಳನ್ನು ಪಡೆಯಲಾರಳು ಎಂದರ್ಥ. ಸಂತಾನ ಪಡೆಯುವ ಸಾಮಥ್ರ್ಯ ನಿಂತಮೇಲೆ ಸಾಮಾನ್ಯವಾಗಿ ಎಲ್ಲ ಸ್ತನಿಗಳೂ ಕೇವಲ ಒಂದೆರಡು ವರ್ಷ ಬದುಕಿರುವುವಾದರೂ ಮನುಷ್ಯ ಜಾತಿಯಲ್ಲಿ ಈ ಅವಧಿ 20-30 ವರ್ಷಗಳಿಗೂ ಮೀರಿ ಇರುವುದು ಒಂದು ವೈಶಿಷ್ಟ್ಯ. ನೈಸರ್ಗಿಕವಾಗಿಯೇ ಇರುವ ಈ ಮಾನವ ಜೀವಕ್ರಿಯಾ ವ್ಯತ್ಯಾಸದ, ಅರ್ಥಾತ್ ದೀರ್ಘಾವಧಿವಾರ್ಧಿಕ್ಯದ, ಅರ್ಥ ಜೀವವಿಜ್ಞಾನಿಗಳಿಗೆ ಇನ್ನೂ ಸರಿಯಾಗಿ ತಿಳಿದಿಲ್ಲ. ಇಂಥ ದೀರ್ಘಕಾಲಿಕ ಸಂತಾನೋತ್ತರ ಕಾಲದಿಂದ ವ್ಯಕ್ತಿ ಪಡೆಯುವ ಅನುಕೂಲವೇನು, ವಿಕಾಸಕ್ರಮದಲ್ಲಿ ಇದಕ್ಕೇನಾದರೂ ಪ್ರಾಮುಖ್ಯ ಇದೆಯೇ ಎಂದು ಹೇಳಲಾಗುವುದಿಲ್ಲ.

ವ್ಯಕ್ತಿ ಮುಟ್ಟಾಗುತ್ತಿರುವ ವಯಸ್ಸಿನಲ್ಲಿ ಕೂಡ ನಾನಾ ಕಾರಣಗಳಿಂದ ಮುಟ್ಟಾಗದೇ ಹೋಗಬಹುದು. ರೋಗಪ್ರಕ್ರಿಯೆಗಳನ್ನು ಬಿಟ್ಟು ಹೀಗೆ ಮುಟ್ಟಾಗದೆ ಇರುವುದು ಮುಖ್ಯವಾಗಿ ಎರಡು ಪರಿಸ್ಥಿತಿಗಳಲ್ಲಿ. ಒಂದು ವ್ಯಕ್ತಿ ಗರ್ಭಿಣಿಯಾದಾಗ. ವಾಸ್ತವವಾಗಿ ಮುಟ್ಟಾಗುವಳೆಂದು ನಿರೀಕ್ಷಿಸಿದ ಕಾಲದಲ್ಲಿ ವ್ಯಕ್ತಿ ಮುಟ್ಟಾಗದೇ ಇದ್ದರೆ ಅದು ಆಕೆ ಗರ್ಭತಾಳಿದಾಳೆಂಬುದರ ಪ್ರಥಮ ಹಾಗೂ ಸರ್ವಸಾಮಾನ್ಯ ಸೂಚನೆ. ಎರಡನೆಯ ಸ್ಥಿತಿ ಅಂದರೆ ಆಕೆ ಮಗುವನ್ನು ಹೆತ್ತು ಮಗುವಿಗೆ ಎದೆಹಾಲು ಊಡಿಸುತ್ತಿರುವ ಸಮಯ. ಈ ಕಾಲದಲ್ಲಿ ಆಕೆ 8-10 ತಿಂಗಳು ಮುಟ್ಟಾಗುವುದಿಲ್ಲ. ಅನಂತರ ಕ್ರಮೇಣ ತಿಂಗಳಿನ ಮುಟ್ಟಿನ ಕ್ರಮ ಪ್ರಾರಂಭವಾಗುತ್ತದೆ.
ಮುಟ್ಟಿನ ಕ್ರಮ ಪ್ರತಿಯೊಬ್ಬ ಸ್ತ್ರೀಯ ವೈಯಕ್ತಿಕ ವೈಶಿಷ್ಟ್ಯವಾದರೂ ಕೆಲವು ಸಾಮಾನ್ಯ ನಿಯಮ ಹಾಗೂ 

ಲಕ್ಷಣಗಳಿಂದೊಡಗೂಡಿದೆ. ಒಂದು ಮುಟ್ಟಿಗು ಮುಂದಿನಕ್ಕೂ ಸಾಮಾನ್ಯವಾಗಿ 4 ವಾರಗಳ (28 ದಿನ, ಒಂದು ಚಾಂದ್ರಮಾನ ತಿಂಗಳು) ಅವಧಿ ಇರುತ್ತದೆ. ಇದನ್ನು ಮುಟ್ಟಾದ ಮೊದಲ ದಿನದಿಂದ ಲೆಕ್ಕಹಾಕಲಾಗುತ್ತದೆ. ಕೆಲವು ವ್ಯಕ್ತಿಗಳಲ್ಲಿ ಅವಧಿ ಕಡಿಮೆ ಇರಬಹುದು ಕೆಲವರಲ್ಲಿ ಹೆಚ್ಚಾಗಿರಬಹುದು. 21ರಿಂದ 35 ದಿನಗಳ ತನಕ ವೈಯಕ್ತಿಕ ವ್ಯತ್ಯಾಸವಿರಬಹುದು. ಆದರೆ ಒಂದೇ ವ್ಯಕ್ತಿಯಲ್ಲಿ ಎರಡು ಮುಟ್ಟುಗಳ ನಡುವೆ ಅವಧಿ ಸಾಮಾನ್ಯವಾಗಿ ಕ್ಲುಪ್ತವಾಗಿರುತ್ತದೆ. ಅರ್ಧದಿನ ಒಂದು ದಿನ ವ್ಯತ್ಯಾಸವಿರಬಹುದು ಅತಂಕ, ಬಿಡುವೇ ಇಲ್ಲದ ಕೆಲಸದ ಹೊರೆ, ಹೊಸಸ್ಥಳದಲ್ಲಿ ಹೊಸ ಜನರೊಡನೆ ವಾಸ ಇತ್ಯಾದಿ ಪರಿಸ್ಥಿತಿಗಳಲ್ಲಿ ಮುಟ್ಟಾಗುವುದು ನಾಲ್ಕಾರು ದಿನಗಳು. 2-4 ವಾರಗಳು ಕೂಡ ತಡವಾಗಬಹುದು.

ಪ್ರಾರಂಭದ ದಿನದಿಂದ ನಾಲ್ಕು ದಿವಸಗಳ ಪರ್ಯಂತ ಮುಟ್ಟು ಹೋಗುವುದು ಸಾಮಾನ್ಯ. ಅದರೆ ವ್ಯೆಯಕ್ತಿಕ ವೈಶಿಷ್ಟ್ಯದಂತೆ ಇದು 2-5 ದಿನಗಳಷ್ಟೂ ಕಡಿಮೆ ಇರಬಹುದು. 5-6 ದಿನಗಳಷ್ಟೂ ಹೆಚ್ಚಾಗಿರಬಹುದು. ಈ ಅವಧಿಯಲ್ಲಿ ಸಾಮಾನ್ಯವಾಗಿ 120 ಮಿಲ್‍ಗಳಷ್ಟು ರಕ್ತಮಿಶ್ರಿತ ದ್ರವ ನಷ್ಟವಾಗುವುದಿದೆ. ಕೆಲವರಲ್ಲಿ 60-80 ಮಿಲ್‍ಗಳಷ್ಟು ಕಡಿಮೆ ಆಗಿಯೋ ಇನ್ನು ಕೆಲವರಲ್ಲಿ 170-200 ಮಿಲ್‍ಗಳಷ್ಟು ಹೆಚ್ಚಾಗಿಯೋ ದ್ರವನಷ್ಟವಾಗುವುದಿದೆ. ಇದು ವ್ಯೆಯಕ್ತಿಕ ವೈಶಿಷ್ಟ್ಯ. ಸ್ರಾವ ಪ್ರಾರಂಭದಲ್ಲಿ ಹೆಚ್ಚಾಗಿದ್ದು ಕೊನೆಕೊನೆಯಲ್ಲಿ ಅತಿ ಸ್ವಲ್ಪವಾಗುತ್ತದೆ. ವಾಸ್ತವವಾಗಿ ರಕ್ತಕೂಡಿದ ದ್ರವ ಬರುವುದು ಗರ್ಭಕೋಶದಿಂದ. ಇದು ಅವಧಿಯಷ್ಟು ಕಾಲವೂ ನಿರಂತರವಾಗಿ ನಿಧಾನವಾಗಿ ಜಿನುಗುತ್ತ ಬರುವುದಿಲ್ಲ. ಆಗಾಗ್ಗೆ ಸ್ವಲ್ಪಸ್ವಲ್ಪ ದ್ರವ ಕೊಚ್ಚಿಹರಿದಂತೆ ಹೊರಬರುವುದು. ಸಾಮಾನ್ಯ ಹೊರಬರುವ ರಕ್ತ ಗರಣಿಕಟ್ಟಬಲ್ಲದಾದರೂ ಅದು ನಿಧಾನವಾಗಿ ಯೋನಿಮಾರ್ಗದಲ್ಲಿ ಧಾವಿಸುತ್ತಿರುವಾಗ ಆ ಲಕ್ಷಣವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಮುಟ್ಟಿನ ರಕ್ತ ದ್ರವವಾಗಿಯೇ ಇರುತ್ತದೆ.

ಮುಟ್ಟು ನೈಸರ್ಗಿಕಕ್ರಮವಾಗಿಯೇ ಇರುವುದರಿಂದ ರಜಸ್ಸ್ರಾವ ಕಾಲದಲ್ಲಿ ವ್ಯಕ್ತಿಯಲ್ಲಿ ಯಾವ ದೈಹಿಕಬಾಧೆ ಅಸಾಮಥ್ರ್ಯಗಳೂ ಕಾಣಬರಬಾರದು. ಅದರೂ ಮುಟ್ಟಿನ ಕಾಲದಲ್ಲಿ ಅನೇಕ ವ್ಯಕ್ತಿಗಳು ಅಲ್ಪ ಇಲ್ಲವೇ ಆಗಾಧ ಬಾಧೆಗಳನ್ನು ಅನುಭವಿಸುತ್ತಾರೆ. ಮೈಭಾರ, ಲವಲವಿಕೆ ಇಲ್ಲದಿರುವುದು. ತಲೆನೋವು, ಹೊಟ್ಟೆನೋವು ಇತ್ಯಾದಿ ಬಾಧೆಗಳು ಯಾವ ಕಾರಣಗಳಿಂದ ಉಂಟಾಗುವುವೋ ತಿಳಿಯದು. ಕಾರಣ ಗೊತ್ತಾಗುವ ಅಪರೂಪ ಸಂದರ್ಭಗಳಲ್ಲಿ ಬಾಧೆಗಳಿಗೆ ಕಾರಣವಾದ ದೈಹಿಕ ಆಕ್ರಮಗಳನ್ನು ಚಿಕಿತ್ಸಿಸಬಹುದು. ಅದರೆ ಬಹುತೇಕ ಈ ಬಾಧೆಗಳು ಮಾನಸಿಕ ಕಾರಣಗಳಿಂದಲೇ ಎಂದು ತೋರುತ್ತದೆ. ಮುಟ್ಟಿನ ಕಾಲ ಒಂದು ಪರ್ವಕಾಲ ಎಂಬ ಭಾವನೆ ಬಲು ಸಾಮಾನ್ಯ. ಹಾಗೆಂದುಕೊಂಡೇ ರೂಢಿಸಿ ಕೊಂಡಿರುವ ವೈಯಕ್ತಿಕ ಸಾಮಾಜಿಕ ನಡೆವಳಿಕೆಗಳೂ ಇಂಥ ಮಾನಸಿಕಜನ್ಯ ಬಾಧೆಗಳಿಗೆ ಕಾರಣವಿರಬಹುದು. ಒಟ್ಟಿನಲ್ಲಿ ಈ ಸ್ಥಿತಿಯ ಚಿಕಿತ್ಸೆ ದುಸ್ಸಾಧ್ಯ.

ವಾಸ್ತವವಾಗಿ ವ್ಯಕ್ತಿಯ ಸಾಮಾನ್ಯ ಜೀವನಕ್ರಮ ಮುಟ್ಟಿನ ದಿನಗಳಲ್ಲಿ ಬೇರೆ ದಿನಗಳಿಗಿಂತ ಏನೂ ವ್ಯತ್ಯಾಸವಾಗಿರುವುದಿಲ್ಲ. ಯೋನಿಯ ಮೂಲಕ ರಕ್ತಮಿಶ್ರಿತ ದ್ರವ ಹೋರಬರುತ್ತಿರುವುದಕ್ಕೆ ನಿಗಾ ಕೊಡುವುದೊಂದು ವಿನಾ ವ್ಯಕ್ತಿ ಮುಟ್ಟಿನ ದಿನಗಳಲ್ಲಿ ಕೂಡ ದಿನದಿನದ ನಡೆವಳಿಕೆಗಳಲ್ಲಿ ಏನು ವ್ಯತ್ಯಾಸವನ್ನೂ ಮಾಡಬೇಕಿಲ್ಲ. ಸ್ನಾನ, ದೈನಂದಿನಕ್ರಿಯೆಗಳು, ಆಟಗಳು, ವ್ಯಾಯಾಮ (ಮಾಡುವವರಲ್ಲಿ) ಇದೆಲ್ಲಕ್ಕೂ ವಿನಾಯಿತಿ ಕೊಡಬೇಕಾಗಿಲ್ಲ. ಬೇಕೆನ್ನಿಸಿದರೆ ಸಂಭೋಗಕ್ರಿಯೆಗೂ ಅಡ್ಡಿಯಿಲ್ಲ. ಮುಟ್ಟಿನ ಕಾಲದಲ್ಲಿ ಅನೇಕ ರೀತಿಯ ವೈಯಕ್ತಿಕ ಮತ್ತು ಸಾಮಾಜಿಕ ನಿರ್ಬಂಧಗಳನ್ನು ಹಾಕಿಕೊಂಡಿರುವುದಕ್ಕೆ ವೈಜ್ಞಾನಿಕ ಆಧಾರಗಳು ಏನೂ ಇಲ್ಲವೆಂದೇ ಹೇಳಬೇಕು.

ಮೇಲಿನ ವಿವರದಿಂದ ಮುಟ್ಟಿಗೂ ಮಕ್ಕಳಾಗುವುದಕ್ಕೂ ನಿಕಟ ಸಂಬಂಧ ಇರುವುದು ವ್ಯಕ್ತವಾಗಿರಬೇಕು. ಗರ್ಭತಾಳಿ ಮಗುವನ್ನು ಹೆತ್ತು ಮಗುವಿಗೆ ಎದೆ ಹಾಲು ಊಡಿಸುತ್ತಿರುವ ಅವಧಿಯಲ್ಲಿ ಮುಟ್ಟಾಗದೇ ಇರುವುದು, ಅನಂತರ ಪ್ರಾರಂಭವಾದ ಮುಟ್ಟಿನ ಕ್ರಮ ಇನ್ನೊಂದು ಸಾರಿ ಗರ್ಭತಾಳುವ ತನಕವೂ ತಿಂಗಳು ತಿಂಗಳೂ ಮುಟ್ಟಾಗುತ್ತಿರುವುದೂ ಒಂದು ವಿಶಿಷ್ಟ ಏರ್ಪಾಡು. ಸ್ತ್ರೀಯ ಪಿಟ್ಯೂಯಿಟರಿ ಗ್ರಂಥ ಮತ್ತು ಅಂಡಾಶಯಗಳೂ ಗರ್ಭಿಣಿಸ್ತ್ರೀಯ ಜರಾಯುವೂ ವಿವಿಧ ಹಾರ್ಮೋನುಗಳನ್ನು ಕ್ಲುಪ್ತಕಾಲದಲ್ಲಿ ಕ್ಲುಪ್ತವಾಗಿ ಸ್ರವಿಸುವುದರಿಂದಲೇ ಈ ಏರ್ಪಾಡು ಸಾಧ್ಯವಾಗಿದೆ. ವಾಸ್ತವವಾಗಿ ಬಾಲಕಿ ಮೈನೆರೆಯುವುದಕ್ಕೂ ವಯಸ್ಕಸ್ತ್ರೀಯಲ್ಲಿ ಮುಟ್ಟು ನಿಲ್ಲುವುದಕ್ಕೂ ಪಿಟ್ಯೂಯಿಟರಿ ಹಾಗೂ ಅಂಡಾಶಯಗಳ ಹಾರ್ವೋನುಗಳೇ ಕಾರಣ.

ಬಾಲಕಿಯ ಪಿಟ್ಯುಯಿಟರಿ ಗ್ರಂಥಿಯಿಂದ ಮೂರು ವಿಶಿಷ್ಟ ಹಾರ್ಮೋನುಗಳು ಇನ್ನೂ ಸ್ರವಿಸಲ್ಪಡುತ್ತಿರುವುದಿಲ್ಲ. ಹುಡುಗಿಯ ಅಂಡಾಶಯಗಳೂ ಗರ್ಭಕೋಶ ಸ್ತನಗಳೂ ಸಣ್ಣದಾಗಿದ್ದು ಅಪಕ್ವ ಸ್ಥಿತಿಯಲ್ಲಿರುತ್ತವೆ. 11-13ನೆಯ ವಯಸ್ಸಿನಲ್ಲಿ ಪಿಟ್ಯುಯಿಟರಿ ಗ್ರಂಥಿಯಿಂದ ಈ ಮೂರು ಹಾರ್ವೋನುಗಳೂ ಸ್ರವಿಸಲು ತೊಡಗುತ್ತವೆ. ವೈಯಕ್ತಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳು, ಅನುವಂಶಿಕತೆ, ದೇಶದ ಹವೆ ಇತ್ಯಾದಿಗಳೆಲ್ಲವುಗಳ ಒಟ್ಟು ಪ್ರಭಾವ ಪಿಟ್ಯೂಯಿಟರಿಯ ಮೇಲೆ ಆ ಕಾಲದಲ್ಲಿ ಕಾಣಬರುವುದರಿಂದ (ಬಹುಶಃ ಪಿಟ್ಯೂಯಿಟರಿ ಆ ಕಾಲಕ್ಕೆ ಸಾಕಷ್ಟು ಬಲಿತಿರುವುದರಿಂದ) ಈ ಮೂರು ಹಾರ್ವೋನುಗಳ ಸ್ರಾವವೂ ಪ್ರಾರಂಭವಾಗುವುದೆಂದು ತೋರುತ್ತದೆ. ಮೊದಲನೆಯ ಹಾರ್ವೋನಿಗೆ ಫಾಲಿಕ್ಯುಲರ್ ಸ್ಟಿಮ್ಯುಲೇಟಿಂಗ್ ಹಾರ್ವೋನ್ (ಎಫ್‍ಎಸ್‍ಎಚ್) ಎಂದು ಹೆಸರು. ಮೇಲೆ ಹೇಳಿರುವ ಆವರಣ ಪ್ರಭಾವಗಳೇ ಆ ವಯಸ್ಸಿಗೆ ತಕ್ಕಷ್ಟು ಬಲಿತಿರುವ ಅಂಡಾಶಯಗಳ ಮೇಲೂ ಏರ್ಪಡುತ್ತದೆ. ತತ್ಫಲವಾಗಿ ಅಂಡಾಶಯಗಳು ಪಕ್ವವಾಗಿ ಬೆಳೆಯುವುದಲ್ಲದೆ ಅವುಗಳೊಳಗೆ ಅಂಡಾಣುವಿನ ತಯಾರಿಯೂ ಪ್ರಾರಂಭವಾಗುತ್ತದೆ. ಬಹುಶಃ ಇನ್ನು ಕೆಲವು ತಿಂಗಳುಗಳಲ್ಲಿ ಪಿಟ್ಯುಯಿಟರಿಯಿಂದ ಇನ್ನೆರಡು ಹಾರ್ವೋನುಗಳೂ ಸ್ರವಿಸಲಾರಂಭಿಸುತ್ತವೆ. ಲ್ಯೂಟಿನೈಸಿಂಗ್ ಹಾರ್ಮೋನ್ (ಎಲ್ ಎಚ್) ಮತ್ತು ಲ್ಯೂಟೊಟ್ರೋಪಿಕ್ ಹಾರ್ಮೋನ್ (ಎಲ್‍ಟಿಎಚ್) ಎಂಬ ಇವು ಎಫ್‍ಎಸ್‍ಎಚ್ ನಿಂದ ಪ್ರಭಾವಿತವಾದ ಅಂಡಾಶಗಳ ಮೇಲೆ ತಮ್ಮವೇ ಪ್ರಭಾವವನ್ನು ಮುಂದುವರಿಸುತ್ತವೆ. ಸರಿಯಾಗಿ ವ್ಯಕ್ತವಾಗದ ಏನೋ ಕಾರಣಗಳಿಂದ ಎಫ್‍ಎಸ್‍ಎಚ್ ಸ್ರಾವವಾಗುತ್ತಿರುವಾಗ ಎಲ್‍ಎಚ್ ಮತ್ತು ಎಲ್‍ಟಿಎಚ್‍ಗಳ ಸ್ರಾವ ಸ್ಥಗಿತವಾಗಿರುತ್ತದೆ. ಎರಡು ವಾರ ಹೀಗಿದ್ದು ಎಫ್‍ಎಸ್‍ಎಚ್ ಸ್ರಾವ ತಟ್ಟನೆ ಕಡಿಮೆ ಆಗಿ ಎಲ್‍ಎಚ್ ಸ್ರಾವ ಪ್ರಾರಂಭವಾಗುತ್ತದೆ. ಇದೂ ಎರಡು ಗವಾ ಪರ್ಯಂತ. ಅನಂತರ ಇದು ನಿಂತು ಪುನಃ ಎಫ್‍ಎಸ್‍ಎಚ್ ಸ್ರಾವ ತೊಡಗುತ್ತದೆ.

ಎಫ್‍ಎಸ್‍ಎಚ್ ಸ್ರಾವವಾಗುತ್ತಿರುವ ಎರಡು ವಾರಗಳು ಅಂಡಾಶಯಗಳಲ್ಲಿ ಅಂಡಾಣು ವೃದ್ಧಿ ಆಗುತ್ತಿರುವುದಷ್ಟೆ. ಇದೇ ವೇಳೆ ಅಂಡಾಣುವಿನ ನೆರೆಕೋಶ ಸಮೂಹದಿಂದ ಈಸ್ಟ್ರೊಜೆನ್ನುಗಳೆಂಬ ಎರಡು ಮೂರು ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಇವುಗಳಿಗೆ ವ್ಯಕ್ತಿಯ ಗರ್ಭಾಶಯ, ಸ್ತನಗಳ ಮೇಲೆ ಪ್ರಭಾವವಿದ್ದು ಅವುಗಳ ಬೆಳೆವಣಿಗೆಗೆ ಕಾರಣವಾಗಿದೆ. ಅಲ್ಲದೆ ವ್ಯಕ್ತಿಯ ದೈಹಿಕಬೆಳೆವಣಿಗೆಯ ಮೇಲೂ ಇದರ ಪ್ರಭಾವ ಉಂಟು. ಎರಡು ವಾರಗಳ ಕೊನೆಯಲ್ಲಿ ಎಫ್‍ಎಸ್‍ಎಚ್ ಸ್ಥಗಿತವಾಗಿ ಎಲ್‍ಎಚ್ ಸ್ರಾವ ಪ್ರಾರಂಭವಾದ ಕೂಡಲೆ ಅಂಡಾಶಯದಿಂದ ಅಂಡಾಣು ಛಿದ್ರಿಸಿ ಹೊರಬರುತ್ತದೆ. ಅರ್ಥಾತ್ ಈಸ್ಟ್ರೊಜೆನ್ನುಗಳ ಸ್ರಾವ ಸ್ಥಗಿತವಗಾಗಿ ಅದರೆ ಕೂಡಲೆ ಅಂಡಾಣುವನ್ನು ಕವಿಚಿದ್ದ ಕೋಶಗಳು ವ್ಯವಸ್ಥಿತಗೊಂಡು ಪೀತಗ್ರಂಥಿ ಕಾರ್ಪಸ್‍ಲ್ಯೂಟಿಯಮ್ ಎಂದಾಗುತ್ತವೆ. ಇದಕ್ಕೆ ಕಾರಣ ಈಗ ಪಿಟ್ಯುಯಿಟರಿಯಿಂದ ಸ್ರವಿಸಲ್ಪಡುತ್ತಿರುವ ಎಲ್‍ಎಚ್ ಎರಡುವಾರ ಪರ್ಯಂತ ಹೀಗೆ ಕಾರ್ಪಸ್ ಲೂಟಿಯಮ್ಮಿನ ಅಸ್ತಿತ್ವಖಚಿತವಾಗಿರುತ್ತದೆ. ಇಷ್ಟೆ ಅಲ್ಲದೆ ಇದೇ ಸಮಯದಲ್ಲಿ ಪಿಟ್ಯೂಯಿಟರಿಯಲ್ಲಿ ಸ್ರವಿಸಲ್ಪಡುತ್ತಿರುವ ಎಲ್‍ಟಿಎಚ್. ಕಾರ್ಪಸಲೂಟಿಯಮ್ಮಿನ ಮೇಲೆ ಪ್ರಭಾವಿಸಿ ಅದು ಪ್ರೊಜೆಸ್ಟಿರೋನ್ ಎಂಬ ಹಾರ್ಮೋನನ್ನು ಸ್ರವಿಸುವಂತೆ ಮಾಡುತ್ತದೆ. ಅಂಡಾಣು ಬಿಡುಗಡೆ ಅದ ಬಳಿಕ ಅಂದರೆ ಈಸ್ಟ್ರೊಜೆನ್ನುಗಳ ಸ್ರಾವ ಸ್ಥಗಿತವಾದಂದಿನಿಂದ ಎರಡುವಾರ ಪರ್ಯಂತ ಅಂಡಾಶಯದಿಂದ ಪ್ರೊಜೆಸ್ಟಿರೋನ್ ಸ್ರವಿಸಲ್ಪಡುತ್ತದೆ. ಇದು ಪೂರ್ವಭಾವಿಯಾಗಿ ಈಸ್ಟ್ರೊಜೆನ್ನುಗಳಿಂದ ಪ್ರಭಾವಿತವಾಗಿ ಗರ್ಭಾಶಯ, ಸ್ತನಗಳನ್ನು ವಿಶಿಷ್ಟವಾಗಿ ಪ್ರಚೋದಿಸುವಂಥದು. ತತ್ಪರಿಣಾಮವಾಗಿ ಗರ್ಭಾಶಯ ವೃದ್ಧಿಗೊಂಡು ಅದರ ಒಳಪದರ ದಪ್ಪವಾಗಿ ಹಾಗೂ ಆರಕ್ತವಾಗಿ ಮಾರ್ಪಡುತ್ತದೆ. ಈ ಎರಡು ವಾರಗಳ ಕೊನೆಗೆ ಪಿಟ್ಯುಯಿಟರಿಯಲ್ಲಿ ಎಲ್‍ಎಚ್ ಸ್ರಾವ ತಟ್ಟನೆ ನಿಂತು ಎಫ್‍ಎಸ್‍ಎಚ್ ಸ್ರಾವ ಪುನರಾರಂಭವಾಗುವುದರಿಂದ ಕಾರ್ಪಸ್ ಲ್ಯೂಟಿಯಮ್ಮಿನ ಅಸ್ತಿತ್ವಕ್ಕೆ ಧಕ್ಕೆಯಾಗಿ ಅದು ನಶಿಸಿಹೋಗುತ್ತದೆ. ಅರ್ಥಾತ್ ಪ್ರೊಜೆಸ್ಟಿರೋನಿನ ಸ್ರಾವ ತಟ್ಟನೆ ನಿಂತುಹೋಗುತ್ತದೆ. ತತ್ಪರಿಣಾಮವಾಗಿ ಗರ್ಭಕೋಶದಲ್ಲಿ ಆಗಿದ್ದ ಮಾರ್ಪಾಡು ಕುಸಿದು ಬೀಳುತ್ತದೆ. ಒಳಪದರದ ಕೋಶಗಳು ನಶಿಸಿ ದ್ರವವಾಗುವುದಲ್ಲದೆ ರಕ್ತನಾಳಗಳ ಛಿದ್ರದಿಂದ ರಕ್ತಸ್ರಾವವೂ ಆಗುತ್ತದೆ. ಈ ಮಿಶ್ರಣದ್ರವವೇ ಮುಟ್ಟುದ್ರವ. ನಾಲ್ಕು ದಿವಸಗಳ ತನಕ ಇಂಥ ಅವನತಿ ಹಾಗೂ ಋತುಸ್ರಾವ ಕಂಡುಬಂದು ಎಫ್‍ಎಸ್‍ಎಚ್ ಅರ್ಥಾತ್ ಈಸ್ಟ್ರೊಜೆನ್ನುಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ನಿಂತುಹೋಗಿ ಗರ್ಭಾಶಯದ ದುರಸ್ತಿಯೂ ಆಗುತ್ತದೆ. ಇನ್ನು ಮುಂದೆ ಹತ್ತು ದಿನಗಳೂ ಇದೇ ಸ್ಥಿತಿ. ಅನಂತರ ಪಿಟ್ಯೂಯಿಟರಿಯಲ್ಲಿ ಎಲ್‍ಎಚ್ ಸ್ರಾವ ಪ್ರಾರಂಭ. ಅಂಡಾಶಯದಲ್ಲಿ ಅಂಡಾಣು ಬಿಡುಗಡೆ. ಕಾರ್ಪಸ್‍ಲ್ಯೂಟಿಯಮ್ ಸೃಷ್ಟಿ. ಪ್ರೊಜೆಸ್ಟಿರೋನಿನ ಸ್ರಾವ. ಮತ್ತೆ ಮುಟ್ಟು-ಹೀಗೆ ಇದು ಸ್ತ್ರೀಯಲ್ಲಿ ಪ್ರತಿಯೊಂದು ನಾಲ್ಕು ವಾರಗಳೂ ಕಾಣಬರುವ ವಿದ್ಯಮಾನ. ಪಿಟ್ಯೂಯಿಟರಿ ಮತ್ತು ಅಂಡಾಶಯಗಳ ಹಾರ್ಮೊನುಗಳ ಕ್ರಮವತ್ತಾದ ಪ್ರಭಾವದಿಂದ ಮೊದಲಸಾರಿ ಮುಟ್ಟಾಗುವುದನ್ನೇ ಮೈನೆರೆಯುವುದು ಎಂದಿದೆ. ವ್ಯಕ್ತಿಗೆ 45-50 ವರ್ಷಗಳಾದ ಬಳಿಕ ಆವರಣದ ಪ್ರಭಾವದಿಂದಲೋ ವ್ಯಕ್ತಿಗೆ ವಯಸ್ಸಾಗಿ ದೇಹಕ್ರಿಯೆಗಳು ಉಡುಗುತ್ತ ಬರುವುದರಿಂದಲೋ ಈ ಹಾರ್ಮೋನುಗಳ ಸ್ರಾವವೂ ಕಡಿಮೆ ಆಗುತ್ತದೆ. ತತ್ಪಲವಾಗಿ ವಯಸ್ಸಾದ ಹೆಂಗಸಿನಲ್ಲಿ ಮುಟ್ಟು ನಿಂತುಹೋಗುತ್ತದೆ.

ಮೇಲೆ ವಿವರಿಸಿರುವ ಮಾಸಿಕಕ್ರಮದಲ್ಲಿ ಬಿಡುಗಡೆ ಆದ ಅಂಡಾಣು ಸಂಭೋಗ ನಿಮಿತ್ತವಾಗಿ ಫಲವಂತವಾಗುವ ಸಂಭವವಿದೆ. ಈ ಅಂಡಾಣು ಬಿಡುಗಡೆ ಆದ ಮೇಲೆ ಅದರ ಪುನರ್ನಿರ್ಮಿತ ಕೋಶಸಮೂಹ ಕಾರ್ಪಸ್‍ಲ್ಯೂಟಿಯಮ್ಮಿನ ಅಸ್ತಿತ್ವ ಇನ್ನೂ ಎರಡೂ ವಾರಗಳು ಎನ್ನುವುದನ್ನು ಜ್ಞಾಪಿಸಿಕೊಳ್ಳಬೇಕು. ಕೊನೆಗೆ ಅದು ತಟ್ಟನೆ ನಶಿಸುವುದಕ್ಕೆ ಕಾರಣ ಪಿಟ್ಯೂಯಿಟರಿಯ ಎಲ್‍ಎಚ್ ಸ್ರಾವ ಸ್ಥಗಿತವಾಗುವುದೆನ್ನುವುದನ್ನೂ ತಿಳಿಯಬೇಕು. ಅದರ ಮೇಲೆ ಹೇಳಿರುವ ಸಂಭವದಂತೆ ಅಂಡಾಣು ಫಲವಂತಿಕೆ ಆದಾಗ ಯಾವುದೋ ಅವ್ಯಕ್ತ ಪ್ರಭಾವದಿಂದ ಪಿಟ್ಯೂಯಿಟರಿಯ ಎಲ್‍ಎಚ್‍ಸ್ರಾವ ಎರಡು ವಾರಗಳ ನಿಂತುಹೋಗದೆ ಮುಂದುವರಿಯುತ್ತದೆ. ಆದ್ದರಿಂದ ಅಂಡಾಶಯದಲ್ಲಿ ಪ್ರೊಜೆಸ್ಟಿರೋನಿನ ಸ್ರಾವವೂ ತತ್ಫಲವಾಗಿ ಗರ್ಭಕೋಶದ ಒಳಪದರವೂ ನಶಿಸದೆ ಮುಂದುವರಿಯುತ್ತವೆ. ಅರ್ಥಾತ್ ವ್ಯಕ್ತಿ ಮುಟ್ಟಾಗುವುದಿಲ್ಲ. ಎಲ್‍ಎಚ್ ಸ್ರವಿಸುತ್ತಿರುವ ತನಕವೂ ಪಿಟ್ಯೂಯಿಟರಿಯಲ್ಲಿ ಎಫ್‍ಎಸ್‍ಎಚ್ ಸ್ರಾವ ಸ್ಥಗಿತವಾಗಿರುವುದರಿಂದ ಅಂಡಾಶಯದಲ್ಲಿ ಅಂಡಾಣು ತಯಾರಿಯೂ ಸ್ಥಗಿತವಾಗಿರುತ್ತದೆ. ಅಂದರೆ ಗರ್ಭಿಣಿವ್ಯಕ್ತಿ ಗರ್ಭಾವಸ್ಥೆ ಕಾಲದಲ್ಲಿ ಪುನಃ ಗರ್ಭತಾಳುವಂತಿಲ್ಲ. ಗರ್ಭವಾಗಿರುವ ಕಾಲದಲ್ಲಿ ಜರಾಯುವಿನಿಂದಲೂ ಪ್ರೊಜೆಸ್ಟಿರೋನ್ ಸ್ರಾವವಾಗುವುದರಿಂದ ಗರ್ಭಕಾಲಪೂರ್ತ ವ್ಯಕ್ತಿ ಮುಟ್ಟಾಗುವುದಿಲ್ಲ.

ಯಾವುದೋ ಕಾರಣದಿಂದ ಗರ್ಭಕಾಲದ ಅಂತ್ಯದಲ್ಲಿ ಪ್ರೊಜೆಸ್ಟಿರೋನಿನ ಸ್ರಾವ ತಟ್ಟನೆ ನಿಂತುಹೋಗುತ್ತದೆ. ಇದೇ ಪ್ರಸವಕ್ಕೆ ಕಾರಣ. ಅಲ್ಲದೆ ಮುಂದೆ ಪಿಟ್ಯೂಯಿಟರಿಯ ಎಫ್‍ಎಸ್‍ಎಚ್ ಸ್ತಾವಕ್ಕೆ ಕಾರಣ. ಅಲ್ಲದೆ ಮುಂದೆ ಪಿಟ್ಯೂಯಿಟರಿಯ ಎಫ್‍ಎಸ್‍ಎಚ್ ಸ್ರಾವಕ್ಕೂ ಎಡೆಗೂಡಬಹುದು. ಅದರೆ ಈ ಸಮಯದಲ್ಲಿ ಅಧಿಕವಾಗಿ ಸ್ರಾವವಾಗುತ್ತಿರುವ ಪಿಟ್ಯೂಯಿಟರಿಯ ಎಲ್‍ಟಿಎಚ್ ಕೂಡ ಪಿಟ್ಯೂಯಿಟರಿಯಲ್ಲಿ ಎಫ್‍ಎಸ್‍ಎಚ್ ಸ್ರಾವಕ್ಕೆ ತಡೆಮಾಡುತ್ತದೆ. ಎಲ್‍ಟಿಎಚ್ ಸ್ತನಗಳ ಮೇಲೆ ಪ್ರಭಾವ ಹೊಂದಿದ್ದು ಪ್ರಸವವಾದ ಮೇಲೆ ಅವುಗಳಲ್ಲಿ ಹಾಲು ಉತ್ಪತ್ತಿ ಆಗುವಂತೆ ಮಾಡುತ್ತದೆ. ಮಗುವಿಗೆ ಎದೆಹಾಲೂಡುತ್ತಿರುವ ತನಕವೂ ಇಂಥ ಪ್ರಭಾವ ಕಂಡುಬರುವುದಿದೆ. ಅಂದರೆ ಅಲ್ಲಿಯ ತನಕ ಪಿಟ್ಯೂಯಿಟರಿ ಎಫ್‍ಎಸ್‍ಎಚ್ ಅಂಡಾಶಯದ ಈಸ್ಟ್ರೊಜೆನ್ ಪ್ರೊಜೆಸ್ಟಿರೋನುಗಳ ಸ್ರಾವ ಸ್ಥಗಿತ. ಅರ್ಥಾತ್ ಋತುಕ್ರಮ ಕಂಡುಬರುವುದಿಲ್ಲ.

ವಯಸ್ಕಹೆಂಗಸರಲ್ಲಿ ಈ ಹಾರ್ಮೋನುಗಳು ಸ್ಥಗಿತವಾಗುವುದರಿಂದ ಅಂತಿಮವಾಗಿ ಮುಟ್ಟು ನಿಂತುಹೋಗುತ್ತದೆ ಎಂದು ಹೇಳಿದೆ. ಕೆಲವು ವ್ಯಕ್ತಿಗಳಲ್ಲಿ ಮುಟ್ಟು ಹಠಾತ್ತನೆ ನಿಂತುಹೋಗುತ್ತದೆ. ಮತ್ತೆ ಕೆಲವರಲ್ಲಿ ಇದು 1-1.5 ವರ್ಷಗಳ ಅವಧಿಯಲ್ಲಿ ಕ್ರಮೇಣ ನಿಲ್ಲುತ್ತದೆ. ಹೇಗಾದರೂ ಕೆಲವರಲ್ಲಿ ಮುಟ್ಟಿನ ಅಂತಿಮ ನಿಲುಗಡೆಯಿಂದ ತೊಂದರೆ ಆಗುವುದಿಲ್ಲ. ಆಗಾಗ್ಗೆ ಮೈ ಬೆವರುವುದು, ಮುಖ ಕೆಂಪಡರಿ ಬಿಸಿಬಿಸಿ ಆಗುವುದು ಮುಂತಾದ ಅಲ್ಪತೊಂದರೆಗಳು ಈ ಕಾಲದಲ್ಲಿ ಅನೇಕರ ಅನುಭವ. ಕೆಲವರಲ್ಲಿ ಇವು ತೀವ್ರವಾಗಿದ್ದು ನಿಶ್ಯಕ್ತಿ, ಮನಸ್ಸಿಗೆ ಜುಗುಪ್ಸೆ ಇತ್ಯಾದಿ ವಿಚಿತ್ರ ಹಿಂಸೆಗಳಿಂದೊಡಗೂಡಿರಬಹುದು.				                                              				(ಎಸ್.ಆರ್.ಆರ್.)

ಮುಟ್ಟಿನ ದೋಷಗಳು: 1. ಮುಟ್ಟಾಗದಿರುವಿಕೆ: ಸಹಜವಾಗಿ ಆಗ ಬೇಕಾದ ಮುಟ್ಟು ಆಗದೇ ಇರುವಿಕೆ (ಎಮೆನೋರ್ಹಿಯ). ಕೆಲ ತಿಂಗಳುಗಳಿಂದ ಹೀಗಾಗಿರುವುದೆಂದು ಸಾಮಾನ್ಯವಾಗಿ ಸ್ತ್ರೀಯರು ವೈದ್ಯರೊಡನೆ ಹೇಳಿಕೊಳ್ಳುವುದಿದೆ. ಇದಕ್ಕೆ ಕಾರಣಗಳು ಬಲುಮಟ್ಟಿಗೆ ಪತ್ತೆ ಆಗಿದ್ದರೂ ಈ ಸ್ಥಿತಿಯ ಚಿಕಿತ್ಸೆ ಇನ್ನೂ 100ಕ್ಕೆ 100 ರಷ್ಟು ಖಾತರಿ ಇಲ್ಲ.

ಮುಟ್ಟಾಗದಿರುವುದು ಮೈನೆರೆಯದ ಬಾಲಕಿಯರಲ್ಲಿ, ಗರ್ಭಿಣಿಯರಲ್ಲಿ. ಮಗುವಿಗೆ ಎದೆ ಹಾಲೂಡಿಸುತ್ತಿರುವ ತಾಯಿಯರಲ್ಲಿ ಹಾಗೂ ಮುಟ್ಟು ನಿಂತು ಹೋಗಿರವ ವಯಸ್ಕಸ್ತ್ರೀಯರಲ್ಲಿ ನೈಸರ್ಗಿಕಸ್ಥಿತಿಯೇ ಹೊರತು ರೋಗವಲ್ಲ. ಈ ಸ್ಥಿತಿಯಲ್ಲಿ ಮುಟ್ಟಾಗದಿರುವುದಕ್ಕೆ ಔಷಧ ಬೇಕಾಗಿಲ್ಲ ಎನ್ನುವುದು ವ್ಯಕ್ತ. ಹಲವು ವೇಳೆ ಸ್ತ್ರೀಯರಲ್ಲಿ ತಾವು ಬಸುರಾಗಿದ್ದೇವೆಂಬ ಭಾವನೆ ಬಲವಾಗಿ ಬೇರೂರಿರುವುದುಂಟು. ಬಸುರಾಗಬೇಕೆಂಬ ಉತ್ಕಟೇಚ್ಛೆ ಇಲ್ಲವೆ ಬಸುರಾಗಿ ಬಿಟ್ಟದ್ದೇನೆಂಬ ತೀವ್ರಭೀತಿಯಿಂದ ಕೂಡಿರುವ ಇವರಲ್ಲಿ ಅವರ ಮನಸ್ಸಿನ ಎಣಿಕೆಯಂತೆಯೇ ಮುಟ್ಟಾಗದಿರುವುದು ಉಂಟು. ಇದಕ್ಕೆ ನಕಲಿ ಬಸಿರು (ಸೂಡೋಸೈಯಿಸಿನ್) ಎಂದು ಹೆಸರು.

ಹೀಗಿಲ್ಲದೆ ಏನೋ ಶಾರೀರಕ ಅವ್ಯವಸ್ಥೆಯ ಕಾರಣದಿಂದ ಮುಟ್ಟಾಗದಿರುವಿಕೆ (ಪ್ರೈಮರಿ ಎಮೆನೋರ್ಹಿಯ) ಎಂಬ ಸ್ಥಿತಿಯಲ್ಲಿ ಮುಟ್ಟುಪ್ರಕ್ರಿಯೆಯಲ್ಲಿ (ಮೆನ್‍ಸ್ಟ್ರುಯಲ್ ಪ್ರಾಸೆಸ್) ಭಾಗವಹಿಸುವ ಅಂಗಗಳ ಶ್ರೇಣಿಯಲ್ಲಿ ಎಲ್ಲೋ ದೋಷ ಇರುತ್ತದೆ. ಮಹಾಮಸ್ತಿಷ್ಕ (ಸೆಂಟ್ರಲ್ ಕಾರ್ಟೆಕ್ಸ್) ಹೈಪೊಥೆಲಮಸ್ ಎಂಬ ಮಿದುಳಿನ ಭಾಗ ಪಿಟ್ಯೂಯಿಟರಿಗ್ರಂಥಿ, ಅಡ್ರೀನಲ್ ಗ್ರಂಥಿ, ಅಂಡಾಶಯಗಳು ಇಲ್ಲವೇ ಗರ್ಭಕೋಶ ಯೋನಿಮಾರ್ಗಗಳಲ್ಲಿ ಎಲ್ಲಿಯಾದರೂ ಅಜನ್ಮನ್ಯೂನತೆಯಾಗಿ ಕಂಡು ಬರಬಹುದು. ಇಂಥ ಸಂದರ್ಭಗಳಲ್ಲಿ ಹುಡುಗಿಗೆ 18 ವರ್ಷ ವಯಸ್ಸು ಮೀರಿದರೂ ಅವಳು ಮೈನೆರೆಯದೆ ಮುಟ್ಟಾಗದೆ ಇರುವಳು. ಹುಡುಗಿ ಮೈನೆರೆದ ಮೇಲೆ ಕೇವಲ ಕೆಲವು ಸಾರಿ ಮುಟ್ಟಾಗಿ ಅನಂತರ ಮುಟ್ಟಾಗದೇ ಇರುವ ಸ್ಥಿತಿಗೆ ದ್ವಿತೀಯಕ ಮುಟ್ಟಾಗದಿರುವಿಕೆ (ಸೆಕೆಂಡರಿ ಎಮೆನೋರ್ಹಿಯ) ಎಂದು ಹೆಸರು. ಇಂಥ ಕೆಲವು ಸಂದರ್ಭಗಳಲ್ಲಿಯೂ ಚಿಕಿತ್ಸೆ ಪರಿಣಾಮಕಾರಿ ಆಗಿರುತ್ತದೆ.
ಪ್ರಜನನಮಾರ್ಗದ (ಜೆನಿಟಲ್ ಪಾತ್‍ವೇ) ಆಜನ್ಮ ನ್ಯೂನತೆಗಳಿಂದ ಮುಟ್ಟಾಗದೇ ಇರುವುದಕ್ಕೆ ಅತಿ ಸಾಮಾನ್ಯ ಕಾರಣವೆಂದರೆ ರಂಧ್ರರಹಿತ ಕನ್ಯಾವಪೆ (ಹೈಮೆನ್) ಯೋನಿಮಾರ್ಗವನ್ನು ಮುಚ್ಚಿರುವಿಕೆ. ಈ ಸ್ಥಿತಿಯಲ್ಲಿ ವಾಸ್ತವವಾಗಿ ವ್ಯಕ್ತಿ ಮೈನೆರೆದು ಮುಟ್ಟಾಗುತ್ತಿದ್ದರೂ ಬಹಿರಂಗವಾಗಿ ಸ್ರಾವವಾಗುವುದಿಲ್ಲ. ಇದಕ್ಕೆ ಅವ್ಯಕ್ತಮುಟ್ಟು (ಕ್ರಿಪ್ಪೊಮೆನೊರ್ಹಿಯ) ಎಂದು ಹೆಸರು. ಕನ್ಯಾವಸ್ಥೆಯಲ್ಲಿ ಯೋನಿಯ ದ್ವಾರವನ್ನು ಒಂದು ತೆಳುಪೊರೆ ಮುಚ್ಚಿದ್ದು ಅವರಲ್ಲಿ ಒಂದು ಸಣ್ಣ ರಂಧ್ರವಿರುತ್ತದೆ. ಮೈನೆರೆದು ಪ್ರಥಮವಾಗಿ ಮುಟ್ಟಾದಾಗ ಈ ರಂಧ್ರದ ಮುಟ್ಟು ದ್ರವ ಹೊಬರುತ್ತದೆ. ಸಾಧಾರಣವಾಗಿ ಪ್ರಥಮ ಸಂಭೋಗ ಕಾಲದಲ್ಲಿ ಈ ಕನ್ಯಾವಪೆ ಹರಿದುಹೋಗುವ ತನಕ ಪ್ರತಿಸಾರಿ ಮುಟ್ಟಾದಾಗಲೂ ಹೀಗಿಯೇ ಇರುತ್ತದೆ. ಕನ್ಯಾವಪೆಯಲ್ಲಿ ರಂಧ್ರವಿಲ್ಲದಿದ್ದರೆ ಪ್ರಥಮ ಮುಟ್ಟಿನ ಸ್ರಾವ ಯೋನಿಯಲ್ಲಿ ತಡೆಗಟ್ಟಲ್ಪಡುತ್ತದೆ. ಮುಂದಿನ ಸಲ ಮುಟ್ಟಾದಾಗಲೂ ಹೀಗೆಯೇ ಆಗುತ್ತ ಯೋನಿ ತುಂಬಿ (ರಕ್ತಯುಕ್ತಯೋನಿ) ಗರ್ಭಕೋಶ ತುಂಬಿ ಕೊನೆಗೆ ಅಂಡನಾಳಗಳೂ ಮುಟ್ಟುದ್ರವದಿಂದ ತುಂಬಿಕೊಳ್ಳುತ್ತವೆ. ಪ್ರತಿಯೊಂದು ಮುಟ್ಟಿನ ಕಾಲದಲ್ಲೂ ಈ ರೀತಿ ಮುಟ್ಟುದ್ರವ ಕೂಡಿಕೊಳ್ಳುತ್ತ ಬಲವಾಗಿ ಹೊಟ್ಟೆನೋವು ಉಂಟಾಗುವುದಿದೆ. ಕನ್ಯಾವಪೆಯನ್ನು ಕೃತಕವಾಗಿ ಛಿದ್ರಿಸಿ ಶೇಖರವಾಗಿರುವ ಮುಟ್ಟುದ್ರವ ಹೊರಹೋಗುವಂತೆ ಮಾಡುವುದು ಈ ಸ್ಥಿತಿಗೆ ತಕ್ಕ ಚಿಕಿತ್ಸೆ.

ಇದಕ್ಕಿಂತ ವಿರಳವಾದ ಆಜನ್ಮ ನ್ಯೂನತೆಗಳಿಂದ ಮುಟ್ಟಾಗದಿರುವುದಕ್ಕೆ ಕಾರಣಗಳಿವೆ: ಯೋನಿ ಅಂಗಾಂಶ ನಾಳೀಕರಣವೇ ಆಗದಿರುವಿಕೆ (ನಾನ್‍ಕೆನಲೈಸೆ ಷನ್), ಗರ್ಭಕೋಶದ ಕಂಠ ಸಹಜವಾಗಿ ವಿಕಸಿಸದೆ ಮುಚ್ಚಿಹೋಗಿರುವುದು (ಸರ್ವೈಕಲ್ ಅಟ್ರೀಸಿಯ), ಗರ್ಭಕೋಶ ಶೈಷವಸ್ಥಿತಿಯಲ್ಲಿರುವುದು (ಹೈಪೊಪ್ಲೇಸಿಯ ಅಫ್ ಯೂಟಿರಸ್), ಅಪರೂಪವಾಗಿ ಗರ್ಭಕೋಶವೇ ಲೋಪವಾಗಿರುವುದು, ಅಂಡಾಶಯಗಳು ಉರಿಊತ ಇಲ್ಲವೇ ಏಡಿಗಂತಿಯಿಂದ ಕಾರ್ಯವಿಮುಖವಾಗಿರಬಹುದು ಇತ್ಯಾದಿ. ಅಂಡಾಶಯದ ಕೆಲವು ಏಡಿಗಂತಿಗಳು ಪುಂಸಕಾರಕಗಳಾಗಿದ್ದು ವ್ಯಕ್ತಿ ಮುಟ್ಟಾಗದೇ ಇರುವುದರ ಜೊತೆಗೆ ಧ್ವನಿ ಒಡೆಯುವುದು, ಗಲ್ಲ ತುಟಿಗಳಲ್ಲಿ ಕೂದಲು ಕಾಣಬಹುದು ಇತ್ಯಾದಿ ಪುರುಷ ಲಕ್ಷಣಗಳೂ ಪ್ರಕಟವಾಗುತ್ತವೆ. ಆಜನ್ಮವಾಗಿಯೇ ಅಂಡಾಶಯಗಳು ಕಾರ್ಯೋನ್ಮುಖವಾಗದೇ ಇರುವ ಸ್ಥಿತಿಗೆ ಟರ್ನರನ ಲಕ್ಷಣ ಕೂಟ (ಟರ್ನರ್ಸ್‍ಸಿನ್‍ಡ್ರೋಮ್) ಎಂದು ಹೆಸರು. ವ್ಯಕ್ತಿಯ ಜನನಾಂಗಗಳು ಬಾಲ್ಯಾವಸ್ಥೆಯಲ್ಲಿದ್ದಂತೆಯೇ ಮುಟ್ಟಾಗದೇ ಇರುವುದು, ದೈಹಿಕವಾಗಿ ಬೆಳೆಯದೇ ಇರುವುದು ಕುತ್ತಿಗೆ ಮೊಟಕಾಗಿದ್ದು ಬುಡ ಬಲು ವಿಸ್ತಾರವಾಗಿರುವುದು ಇವು ಈ ಲಕ್ಷಣಕೂಟದ ವೈಶಿಷ್ಟ್ಯಗಳು. ಸೈಯಿನ್ ಲೆವಿಎನ್‍ಥಾಲನ ಲಕ್ಷಣಕೂಟ ಎಂಬುದು ಇನ್ನೊಂದು. ಇದರಲ್ಲಿ ಅಂಡಾಶಯಗಳಲ್ಲಿ ಅಂಡಾಣುಗಳು ವಿಕಸಿಸುವ ಬದಲು ಖಾಲಿಗುಡ್ಡೆಗಳಂಥ ರಚನೆಗಳು ಉದ್ಭವಿಸುತ್ತವೆ. ಈ ಸ್ಥಿತಿಯಲ್ಲಿ ಮುಟ್ಟು ನಿಂತಿರುವುದಲ್ಲದೆ ಮುಖ ಮೈಗಳು ರೋಮಯುಕ್ತವಾಗಿರುತ್ತವೆ ಕೂಡ. ಶಸ್ತ್ರಕ್ರಿಯೆಯಿಂದ ಅಂಡಾಶಯಗಳನ್ನು ನಿರ್ಮೂಲ ಮಾಡಿದಾಗ, ಇಲ್ಲವೆ ಎಕ್ಸ್‍ಕಿರಣಗಳಿಂದ ಅಥವಾ ಏಡಿಗಂತಿಗಳಿಂದ ಅವು ನಿಷ್ಕ್ರಿಯಗೊಂಡಾಗ ಕೂಡ ಮುಟ್ಟು ಆಗದೇ ಹೋಗುತ್ತದೆ. ಗರ್ಭಕೋಶದ ಒಳಪದರವನ್ನು ರೇಡಿಯಮ್ ವಿಕಿರಣನದಿಂದ ನಾಶಪಡಿಸಿರುವಾಗ ಇಲ್ಲವೇ ಪೂರ್ಣವಾಗಿ ಗರ್ಭಕೋಶವನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಿರುವಾಗ ಮುಟ್ಟಾಗದಿರುವುದಕ್ಕೆ ಗರ್ಭಕೋಶ ಕಾರಣವಾಗಿರುತ್ತದೆ.
ಮುಟ್ಟಾಗದೇ ಇರುವುದಕ್ಕೆ ಪಿಟ್ಯೂಯಿಟರಿ ಗ್ರಂಥಿ ಕಾರಣವಾಗಿರುವ ಸಂದರ್ಭಗಳಲ್ಲಿ ಅದು ರೋಗ ಇಲ್ಲವೇ ಏಡಿಗಂತಿಯಿಂದ ನಿಷ್ಕ್ರಿಯಗೊಂಡಿರುತ್ತದೆ. ಪ್ರಸವೋತ್ತರ ಪ್ರಸಂಗವಾಗಿ ಅದು ಅವನತಿ ಹೊಂದಿರುವುದೂ ಉಂಟು. ಇಲ್ಲವೇ ಪ್ರಬುದ್ಧತೆಯ ಸಮಯದಲ್ಲಿ ಅದು ವಿಕಸಿಸದೆ ಶೈಶವಾವಸ್ಥೆಯಲ್ಲಿ ಮುಂದುವರಿಯುವುದು ಉಂಟು. ಈ ಸಂದರ್ಭಗಳಲ್ಲೂ ಮುಟ್ಟಾಗದೇ ಇರುವುದಿದೆ. ಕಶಿಂಗನ ರೋಗ ಎಂಬ ಸ್ಥಿತಿಯಲ್ಲಿ ಪಿಟ್ಯುಯಿಟರಿಯಲ್ಲಿ ಪ್ರತ್ಯಾಮ್ಲವಾಗಿ ಕಣಗಳ ವೃದ್ಧಿ ಆಗುವುದಿದೆ. ಇದರಲ್ಲಿ ಇನ್ಸುಲಿನ್ನಿಗೆ ಮಣಿಯದ ಮಧುಮೂತ್ರರೋಗ, ಎಮ್ಮೆಯ ಮೈಯಲ್ಲಿರುವಂತೆ ದೇಹದಲ್ಲಿ ಕೊಬ್ಬಿನ ಶೇಖರಣೆ ಆಗಿರುವಿಕೆ. ಪೂರ್ಣಚಂದ್ರಾಕಾರದ ಮುಖ ಇವುಗಳೂ ಮುಟ್ಟಾಗದಿರುವುದರ ಜೊತೆಗೆ ಕಂಡುಬರುತ್ತವೆ. ಷೀಹಾನನ ರೋಗದಲ್ಲಿ ರಕ್ತಪೂರೈಕೆಯ ಕೊರೆತೆಯಿಂದಾಗಿ ಪಿಟ್ಯೂಯಿಟರಿಯ ಸಮಸ್ತಕಾರ್ಯವೂ ಅಧೋಗತಿಗೆ ಇಳಿದಿರುತ್ತದೆ. ಆಗ ಮುಟ್ಟಾಗದಿರುವುದು ಜೊತೆಗೆ ಕಾಮ ಅಡಗಿ ಎದೆಹಾಲು ಕಡಿಮೆ ಆಗಿ ಇನ್ಸುಲಿನ್ನಿಗೆ ತೀವ್ರ ಪ್ರತಿಕ್ರಿಯೆ ತೋರುವ ಮಧ ಮೂತ್ರರೋಗ ಕಂಡುಬರುವುದಿದೆ.
ಮುಟ್ಟಾಗದೇ ಇರುವುದಕ್ಕೆ ಇನ್ನಿತರ ಕಾರಣಗಳೆಂದರೆ ಥೈರಾಯ್ಡ್‍ಗ್ರಂಥಿಯ ಕ್ರೆಟಿನಿಸಮ್ ಎಂಬ ರೋಗ, ಅಡ್ರೀನಲ್‍ನ ಹೊರವಲಯದ ರೋಗ, ಮಧುಮೂತ್ರ ರೋಗದ ತೀವ್ರ ಆಘಾತ, ಅತಿಯಾಗಿ ಶಕ್ತಿಗುಂದಿಸುವ ರೋಗಗಳು, ದೀರ್ಘಕಾಲಿಕ ಆಹಾರಕೊರತೆ ಮತ್ತು ಅನೊರೆಕ್ಸಿಯನರ್ವೋಸ ಎಂಬ ರೋಗ.

ಚಿಕ್ಕಂದಿನಿಂದ ಕಂಡುಬಂದಿರುವ ಘಟನೆಗಳನ್ನೆಲ್ಲ ಲಕ್ಷಿಸಿ ವ್ಯಕ್ತಿಮುಟ್ಟಾಗದಿರುವುದಕ್ಕೆ ಮೇಲಿನವುಗಳ ಪೈಕಿ ಯಾವುದು ಕಾರಣ ರೋಗ ಎಂದು ಕಂಡುಹಿಡಿಯಲು ವ್ಯಾಪಕ ಪರೀಕ್ಷಾ ವಿಧಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೂ ರೋಗ ಚಿಕಿತ್ಸಾ ಫಲಿತಾಂಶಗಳಲ್ಲಿ ಅತಿ ನಿರುತ್ಸಾಹಕರವಾಗಿರುವುದೇ ಸಾಮಾನ್ಯ. ಪ್ರತಿಯೊಂದು ಮಾಸಿಕ ಚಕ್ರದ ಅವಧಿಯೆಲ್ಲೂ ಹಾರ್ಮೋನುಗಳನ್ನು ಕ್ರಮಶಃ ಬಳಸುತ್ತ ಮೂರು ನಾಲ್ಕು ಬಾರಿ ಚಿಕಿತ್ಸಿಸಿ ವ್ಯಕ್ತಿ ತಾನಾಗಿಯೆ ಮುಟ್ಟಾಗುತ್ತಾಳೇನೋ ಎಂದು ನೋಡಬಹುದು. ಸಂಬಂಧಿಸಿದ ಅಂಗಗಳ ವೈಪರೀತ್ಯ ಆಗಾಧವಾಗಿಲ್ಲದಿದ್ದ ಸಂದರ್ಭಗಳಲ್ಲಿ ರೋಗ ಗುಣವಾಗುವ ಸಂಭವವಿದೆ. ಅದರೆ ಚಿಕಿತ್ಸೆಯನ್ನು ಪ್ರಾರಂಭಿಸುವುದಕ್ಕೇ ಬಲುವಿಳಂಬವಾಗಿದ್ದರೆ ಚಿಕಿತ್ಸಾ ಫಲಿತಾಂಶ ಅನುಗುಣವಾಗಿ ನಿರಾಶಾದಾಯಕ ಆಗಿರುತ್ತದೆ. ಮೈನೆರೆಯುವುದೇ ತಡವಾಗಿರುವ ಅಪರೂಪಸಂದರ್ಭಗಳಲ್ಲಿ (ಡಿಲೇಡ್‍ಪ್ಯೂಬರ್ಟಿ) ವಿನಾ ಮೂಲತಃ ಮುಟ್ಟಾಗದೇ ಇರುವ ಸ್ಥಿತಿಗೆ ಸಾಮಾನ್ಯವಾಗಿ ಚಿಕಿತ್ಸೆ ಇಲ್ಲ.

2 ಅತಿರಜಸ್ಸ್ರಾವ (ಮೆನೊರ್ಹೇಜಿಯ): ಪ್ರತಿಯೊಂದುಸಲ ಮುಟ್ಟಾದಾಗಲೂ ಅತಿ ಹೆಚ್ಚಾಗಿ ಋತುಸ್ರಾವವಾಗುವಿಕೆ. ಮಾಮೂಲಾಗಿ 3-4 ದಿನ ಮುಟ್ಟು ಹೋಗುತ್ತಿರುವ ಬದಲು 7-10 ದಿನ ಹೋಗುತ್ತದೆ ಮತ್ತು 200 ಮಿಲ್‍ಗಳಿಂಗಿಂತಲೂ ಹೆಚ್ಚಾಗಿ ಸ್ರಾವವಾಗುವುದಿದೆ. ಇಷ್ಟಾದರೂ ಎರಡು ಮುಟ್ಟುಗಳ ನಡುವಿನ ಅವಧಿಯಲ್ಲಿ ವ್ಯತ್ಯಾಸವಿರುವುದಿಲ್ಲ ಸಾಮಾನ್ಯವಾಗಿ ಇದು ಸ್ವತಃ ಒಂದು ರೋಗ ಅಗಿರದೆ ಪ್ರಜನನಕ್ರಿಯೆಯಲ್ಲಿ ಏನೋ ಎಡವಟ್ಟಾಗಿರುವುದರ ಲಕ್ಷಣವಾಗಿರುವುದೇ ಹೆಚ್ಚು. ಅತಿರಜಸ್ಸ್ರಾವಕ್ಕೆ ರಕ್ತ ಒತ್ತಡಾಧಿಕ್ಯ ಸಾಮಾನ್ಯ ಕಾರಣವಾಗಿರಬಹುದು ಎನ್ನಿಸಿದರೂ ಹಾಗಿರುವುದು ಅಪರೂಪ. ಬದಲು ಆಶ್ಚರ್ಯ ಎನ್ನಿಸಿದರೂ ಅಲ್ಪಕಣರಕ್ತತ್ತೆ (ಅನೀಮಿಯ) ಕಾರಣವಾಗಿರಬಹುದು. ಅಲ್ಪಕಣರಕ್ತಕ್ಕೆ ಅತಿರಜಸ್ಸ್ರಾವದ ಪರಿಣಾಮವೂ ಆಗಿರಬಹುದು. ಹೀಗಾಗಿ ಈ ಸ್ಥಿತಿ ಕ್ರಮೇಣ ಹೆಚ್ಚು ಹದಗೆಡುವ ವಿಷವರ್ತುಲ ಆಗಬಹುದು. ಅತಿರಜಸ್ಸ್ರಾವ ಮಾನಸಿಕ ಕಾರಣಗಳಿಂದಲೂ ಉಂಟಾಗಬುಹುದು. ಕೆಲವರಲ್ಲಿ ಮಾನಸಿಕ ಹಾಗೂ ಲೈಂಗಿಕ ವಿವಿಧೋದ್ದೇಶಗಳ ಪೂರೈಕೆಗಾಗಿ ಅನುಕೂಲ ನೆಪ ಆಗಬಹುದಾದ್ದರಿಂದ ಈ ಪರಿಸ್ಥಿತಿ ಉದ್ಭವಿಸಬಹುದು. ಅತಿರಸ್ಸ್ರಾವಕ್ಕೆ ಸ್ಥಳೀಯ ಅವ್ಯವಸ್ಥೆಗಳು ಕಾರಣವಾಗಿರುವುದು ಸಾಮಾನ್ಯ. ಗರ್ಭಕೋಶದ ಉರಿಊತ, ಸ್ಥಾನಪಲ್ಲಟವಾಗಿರುವಿಕೆ ಗಂತಿಯುಕ್ತವಾಗಿವಿಕೆ, ಗರ್ಭವಲ್ಲದೆ ಬೇರೆ ಕಾರಣಗಳಿಂದ ಗರ್ಭಕೋಶ ದೊಡ್ಡದಾಗಿರುವಿಕೆ ಇಂಥ ಸ್ಥಿತಿಗಳಲ್ಲಿ ಅತಿರಸ್ಸ್ರಾವವಾಗುವುದಿದೆ. ಥೈರಾಯ್ಡ್‍ಗ್ರಂಥಿಯ ಅತಿಸ್ಸ್ರಾವದಿಂದ ನರಳುವ ವ್ಯಕ್ತಿ ಸ್ವಲ್ಪಕಾಲಾನಂತರ ಮುಟ್ಟಾಗದೇ ಹೋಗಬಹುದಾದರೂ ಮೊದಮೊದಲು ಅತಿರಜಸ್ಸ್ರಾವವಾಗುವುದಿದೆ. ಕೆಲವು ಚರ್ಮ ರೋಗಗಳಿಗೂ ಮುಟ್ಟುನಿಲ್ಲುತ್ತಿರುವ ವ್ಯಕ್ತಿಗಳ ಬಾಧೆಗಳಿಗೂ ಚಿಕಿತ್ಸಕಗಳಾಗಿ ಈಸ್ಟ್ರೊಜೆನ್ನುಗಳನ್ನು ಆಧಿಕಪ್ರಮಾಣದಲ್ಲಿ ಅಧಿಕಕಾಲಿಕವಾಗಿ ಗರ್ಭಕೋಶದೊಳಗೆ ಪ್ಲಾಸ್ಟಿಕ್‍ವಂಕಿಯನ್ನು (ಲೂಪ್) ಅಳವಡಿಸಿರುವಾಗ ಅನೇಕರಲ್ಲಿ ಅತಿರಜಸ್ಸ್ರಾವವಾಗುವುದು ಕಂಡುಬರುತ್ತದೆ. ಕಾರಣಾಂತರಗಳಿಂದ ಎರಡು ಮುಟ್ಟುಗಳ ನಡು ಅವಧಿ ಮೂರು ವಾರಗಳಷ್ಟು ಕಡಿಮೆ ಆದಾಗಲೂ ಅತಿರಜಸ್ಸ್ರಾವವಾಗುವುದಿದೆ.
ಸಾಮಾನ್ಯವಾಗಿ ಅತಿರಜಸ್ಸ್ರಾವವಾಗುತ್ತಿರುವ ವ್ಯಕ್ತಿಗಳಲ್ಲಿ ಆ ವೇಳೆ ಬಳಲಿಕೆ ಕಂಡುಬರುವುದು ಆಶ್ಚರ್ಯವಲ್ಲ. ಈ ಸ್ಥಿತಿಯನ್ನು ಚಿಕಿತ್ಸಿಸುವುದು ಕಷ್ಟ. ಮೂಲಕಾರಣ ಪತ್ತೆ ಅದರೆ ಅದನ್ನು ಚಿಕಿತ್ಸಿಸಬಹುದು. ಇಲ್ಲದಿದ್ದರೆ ವ್ಯಕ್ತಿಯ ಸಾಮಾನ್ಯ ಆರೋಗ್ಯ ಮತ್ತು ಪೌಷ್ಟಿಕಸ್ಥಿತಿಗಳನ್ನು ಉತ್ತಮಗೊಳಿಸುವುದು ಒಂದು ಮಾರ್ಗ. ಏಕೆಂದರೆ ಚಿಕಿತ್ಸೆಕಗಳಾಗಿ ಲೈಂಗಿಕಹಾರ್ಮೋನುಗಳ ಬಳಕೆ ಅನೇಕ ವೇಳೆ ಅನುಪಯುಕ್ತ.

3 ಮೆಟ್ರೊರ್ಹೇಜಿಯ: ಎರಡು ಮುಟ್ಟುಗಳ ನಡುವೆ ಯಾವಯಾವಾಗಲೊ ಅಷ್ಟಿಷ್ಟು ಮುಟ್ಟು ಹೋಗುತ್ತಿರುವುದು ಈ ರೋಗದ ವೈಶಿಷ್ಟ್ಯ, ಸಾಮಾನ್ಯವಾಗಿ ಗರ್ಭಕೋಶದ ಗಂತಿಸ್ಥಿತಿಗಳಲ್ಲಿ ಹೀಗಾಗುವುದಿದೆ. ಬಿಡುವೇ ಇಲ್ಲದೆ ನಿರಂತರವಾಗಿ ರಜಸ್ಸ್ರಾವವಾಗುವ ಸಂಭವವೂ ಇದೆ. ಗರ್ಭಪಾತ. ಅನ್ಯಸ್ಥಾನದಲ್ಲಿ ಗರ್ಭ ತಾಳುವಿಕೆ (ಎಕ್ಟಾಪಿಕ್ ಪ್ರೆಗ್ನೆನ್ಸಿ), ಪ್ರಸವಾಂಗಗಳ ಏಡಿಗಂತಿ, ಈ ಪರಿಸ್ಥಿತಿಗಳಲ್ಲಿ ನಿರಂತರವಾಗಿ ರಜಸ್ಸ್ರಾವವಾಗುವುದಿದೆ. ಮೂಲಕಾರಣವನ್ನು ಚಿಕಿತ್ಸಿಸುವುದರಿಂದ ಈ ದೋಷವನ್ನು ಪರಿಹರಿಸಬಹುದು.

4 ಮುಟ್ಟುನೋವು (ಡಿಸ್‍ಮೆನೋರ್ಹಿಯ): ಮುಟ್ಟಿನ ಕಾಲದಲ್ಲಿ ಸೊಂಟಕಿಬ್ಬೊಟ್ಟೆಗಳು ನೋಯುವಿಕೆ. ಈ ಸ್ಥಿತಿಯಲ್ಲಿ ಲೈಂಗಿಕಾಂಗಗಳ ರಚನೆಯಲ್ಲಾಗಲಿ ಹಾರ್ಮೋನುಗಳ ಸ್ರಾವದಲ್ಲಾಗಲಿ ಸಾಮಾನ್ಯವಾಗಿ ಏನು ಏರುಪೇರೂ ಕಾಣಬರುವುದಿಲ್ಲ. ಮುಟ್ಟುನೋವು ಮೂರುಬಗೆಯದ್ದಾಗಿದೆ:

(I) ರಕ್ತದುಂಬಿಕೆ ಕೃತಃ ಮುಟ್ಟುನೋವು (ಕನ್‍ಜೆಸ್ಟಿವ್ ಡಿಸ್‍ಮೆನೋರ್ಹಿಯ), ಸೊಂಟ ಹಾಗೂ ನಡುವಿನಲ್ಲಿ ಮತ್ತು ಕಿಬ್ಬೊಟ್ಟೆಯಲ್ಲಿ ಏನೋ ಒಂದು ಬಗೆ ಹಿಂಸಕಾರಕ ಅದರೂ ಅತಿಯಾಗಿ ಬಾಧಿಸುವ ನೋವಾಗುವುದು ಇದರವೈಶಿಷ್ಟ್ಯ. ಮುಟ್ಟಾಗುವುದಕ್ಕೆ ಒಂದೆರಡುದಿನ ಮುಂಚೆಯೇ ಇಂಥ ನೋವು ಕಂಡುಬಂದಿದ್ದರೆ ಮುಟ್ಟಾದ ಕೂಡಲೆ ನೋವೂ ನಿಂತುಹೋಗುತ್ತದೆ. ಮಲಬದ್ಧತೆ ಮತ್ತು ದೊಡ್ಡಕರುಳ ಹಿಂಡಿಕೆ (ಸ್ಟಾಸ್ಮ್) ಅದೇ ಕಾಲದಲ್ಲಿ ಅನೇಕರಲ್ಲಿ ಕಂಡುಬಂದು ನೋವು ತೀವ್ರವಾಗಿರುವುದಕ್ಕೆ ಕಾರಣವಾಗಿರಬಹುದು. ಮಲಬದ್ಧತೆಗೆ ಭೇದಿಔಷಧಿ ತೆಗೆದುಕೊಳ್ಳುವುದು ಯುಕ್ತವಲ್ಲ. ಏಕೆಂದರೆ ಮಲಬದ್ಧತೆ ಮುಟ್ಟುನೋವಿನ ಫಲವೇ ಹೊರತು ಕಾರಣವಲ್ಲ. ಜೊತೆಗೆ ಭೇದಿಮಾಡಿಸುವ ಔಷಧಗಳಿಂದ ಮುಟ್ಟುನೋವು ಹೆಚ್ಚೇ ಆಗಬಹುದು. ಇದರ ಬದಲು ನೋವನ್ನು ಕಡಿಮೆಮಾಡಲು ಬಿಸ್ಕೋಪ್ಯಾನ್ ಮುಂತಾದ ಹಿಂಡಿಕೆಶಾಮಕವನ್ನು (ಅಂಟಿಸ್ಪಾಸ್ಮಾಡಿಕ್ಸ್) ತೆಗೆದುಕೊಳ್ಳುವುದು ಒಳ್ಳೆಯದು.

(ii) ಮುಟ್ಟುಶೂಲೆ (ಸ್ಪಾಸ್ಮಾಡಿಕ್ ಡಿಸ್‍ಮೆನೋರ್ಹಿಯ): ಮುಟ್ಟು ನೋವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಕಾಣಬರುವ ಸ್ಥಿತಿ. ಮುಖ್ಯವಾಗಿ ಇದು ಹಿಂಡಿದಂತಾಗುದ ಕಿಚ್ಚುನೋವು. ಸೊಂಟನೋವು ಮೈಭಾರ ಆಗುವಿಕೆ ಇವೂ ಇರಬಹುದು. ಮುಟ್ಟಿನ ಮೊದಲನೆಯ ದಿನ ಬಾಧೆ ಅತ್ಯಂತ ತೀವ್ರವಾಗಿದ್ದು ಕ್ರಮೇಣ ಕಡಿಮೆ ಆಗುತ್ತದೆ. ಮುಟ್ಟಾಗುತ್ತಿರುವ ವಯಸ್ಸಿನ ಸುಮಾರು 50% ಸ್ತ್ರೀಯರು ಹಲವು ಬಾರಿಯಾದರೂ ಈ ಶೂಲೆಯನ್ನು ಅನುಭವಿಸಿರುತ್ತಾರೆ. ಅದರೆ ಸುಮಾರು 10% ಸ್ತ್ರೀಯರಲ್ಲಿ ಮಾತ್ರ ನೋವು ಬಲು ತೀವ್ರವಾಗಿರುತ್ತದೆ. ಮೈನೆರೆದ ಮೇಲೆ 2-3 ವರ್ಷಗಳು, ಅಲ್ಲಿಂದ ಮುಂದೆ ವ್ಯಕ್ತಿಯ 18-19 ವರ್ಷಗಳ ತನಕ ಮುಟ್ಟುಶೂಲೆ ಬಲುಸಾಮಾನ್ಯ ಅದರೂ ಶೂಲೆ ಅಷ್ಟು ತೀವ್ರವಾಗಿರುವುದಿಲ್ಲ. ಜೊತೆಗೆ ಈಸ್ಟ್ರೊಜೆನ್ನುಗಳಿಂದ ಇದನ್ನು ಸುಲಭವಾಗಿ ಚಿಕಿತ್ಸಿಸಬಹುದಾಗಿದೆ. 19-20ನೆಯ ವಯಸ್ಸಿನವರಲ್ಲಿ ಶೂಲೆಯ ತೀವ್ರತೆ ಸಹನಾತೀತವಾಗಿರುತ್ತದೆ. ಕಿಬ್ಬೊಟ್ಟೆ ಶೂಲೆ ಪ್ರಾರಂಭವಾಗಿ ಸೊಂಟ ಒಡೆತ, ಹೊಟ್ಟೆಹಿಂಡಿದಂತಾಗುವುದು, ಇಂಥ ಬಾಧೆಗಳು ಕಂಡುಬಂದು ಳಿ-1 ಗಂಟೆಕಾಲ ತಡೆದುಕೊಲ್ಳುವುದೇ ಪ್ರಯಾಸವಾಗಿ ವಮನ ಹಾಗೂ ಅತೀದ ನಿತ್ರಾಣಗಳಿಂದ ವ್ಯಕ್ತಿ ಬಳಲಿಹೋಗುವುದಿದೆ. ಬಹುಮಕ್ಕಳ ತಾಯಿಯರಲ್ಲಿ ಮುಟ್ಟುಶೂಲೆ ಹೆಚ್ಚಾಗಿ ಕಂಡುಬರುವುದಾದರೂ ಅವರಿಗೆ 35 ವರ್ಷಗಳಾದ ಬಳಿಕ ಈ ಸ್ಥಿತಿ ವಿರಳವಾಗುತ್ತದೆ. ಈ ಕಾಲಕ್ಕೆ ಶೂಲೆ ತಾನಾಗಿಯೇ ಏಕೆ ನಿಂತುಹೋಗುತ್ತದೆ. ಎನ್ನುವುದಕ್ಕೆ ಕಾರಣ ತಿಳಿಯದು. ಬಂಜೆಯರಲ್ಲಿ ಮುಟ್ಟುಶೂಲೆ ಕಾಣಬರುವುದೇ ಇಲ್ಲವೆನ್ನಬಹುದು. ಅನೇಕರಲ್ಲಿ ಮದುವೆ ಆಗಿ ಲೈಂಗಿಕಜೀವನ ಪ್ರಾರಂಭವಾದಾಗ ಇಲ್ಲವೇ ಒಂದು ಮಗು ಆದಮೇಲೆ ಶೂಲೆ ನಿಂತುಹೋಗುವುದು ತಿಳಿದಿದೆ. ಅದರೆ ಅವಿವಾಹಿತರಿಗೆ ಈ ಸೂಚನೆ ಕೊಡುವುದು ಸರಿಎನ್ನಿಸುವುದಿಲ್ಲ. ಕೆಲವರಲ್ಲಿ ನಿರಂತರ ರಕ್ತಸ್ರಾವವಾಗುತ್ತದೆ. ಆದ್ದರಿಂದ ಪ್ರೊಜಿಸ್ಟಿರೋನನ್ನು ಕೊಟ್ಟು ರೋಗವನ್ನು ಚಿಕಿತ್ಸಿಸಬಹುದು. ಕಾಲಾಂತರದಲ್ಲಿ ಈ ರೋಗ ತಾನಾಗಿಯೇ ವಾಸಿ ಆಗುವುದರಿಂದ ಚಿಕಿತ್ಸೆಯನ್ನು ಒಂದು ವರ್ಷಕ್ಕೂ ಮೀರಿ ಮುಂದುವರಿಸಬೇಕಾಗಿಲ್ಲ. 		        		
(ಜೆ.ವೈ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ